ಆಡಮ್ಸ್, ಜಾನ್ ಕ್ವಿನ್ಸಿ
(1767-1848). ಪ್ರಸಿದ್ಧ ಆಡಮ್ಸ್ ಮನೆತನದವ. ಅಮೆರಿಕ ಸಂಯುಕ್ತಸಂಸ್ಥಾನದ ಎರಡನೆಯ ರಾಷ್ಟ್ರಾಧ್ಯಕ್ಷ ಜಾನ್ ಆ್ಯಡಂಸ್‍ನ ಮಗ. 1825 ರಿಂದ 1829ರವರೆಗೆ ಅಮೆರಿಕದ ಆರನೆಯ ಅಧ್ಯಕ್ಷನಾಗಿ ಕೆಲಸಮಾಡಿದ. ಬಾಲ್ಯದಿಂದಲೂ ತುಂಬ ಮೇಧಾವಿ. ಹುಡುಗನಾಗಿರುವಾಗಲೆ ತಂದೆಯೊಡನೆ ಯೂರೋಪಿನ ನಾನಾ ಕಡೆ ತಿರುಗಿ ಅಪಾರ ಅನುಭವವನ್ನು ಸಂಪಾದಿಸಿದ. ಅನಂತರ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಗಿಸಿ ನ್ಯಾಯಶಾಸ್ತ್ರದಲ್ಲೂ ಪ್ರವೀಣನಾದ. ನೆದರ್ಲೆಂಡ್ಸ್, ಲಂಡನ್, ಪೋರ್ಚುಗಲ್, ಜರ್ಮನಿ ಮುಂತಾದ ದೇಶಗಳಲ್ಲಿ ಅಮೆರಿಕದ ಅಧಿಕೃತ ನಿಯೋಗಿಯಾಗಿ (ಮಿನಿಸ್ಟರ್) ಕೆಲಸಮಾಡಿದ. 1806ರಲ್ಲಿ ಮಸಾಚಸೆಟ್ಸ್ ಕ್ಷೇತ್ರದಿಂದ ಸೆನೆಟ್ ಸಭೆಗೆ ಚುನಾಯಿತನಾದ. ಸ್ವತಂತ್ರಪ್ರವೃತ್ತಿ ಮತ್ತು ಪ್ರಾಮಾಣಿಕತೆಯ ಪರಿಣಾಮವಾಗಿ ಪಕ್ಷದವರೊಡನೆ ವಿರೋಧ ಬೆಳೆದುದರ ಪರಿಣಾಮವಾಗಿ ಸದಸ್ಯತ್ವಕ್ಕೆ ರಾಜೀನಾಮೆಯನ್ನಿತ್ತ (1808). 1809ರಲ್ಲಿ ಅವನು ರಷ್ಯದಲ್ಲಿ ಸಂಯುಕ್ತಸಂಸ್ಥಾನದ ನಿಯೋಗಿಯಾದ. ಅದು, ನೆಪೋಲಿಯನ್ ಯೂರೋಪು ರಾಷ್ಟ್ರಗಳ ಅಸ್ತಿತ್ವವನ್ನೇ ಅಲುಗಾಡಿಸುತ್ತಿದ್ದ ಕಾಲ. ಎಂಥ ರಾಯಭಾರಿಗೂ ಹೊರದೇಶದಲ್ಲಿ ತನ್ನ ನಾಡಿನ ಹಿತವನ್ನು ಕಾಯ್ದುಕೊಳ್ಳುವುದು ಕಷ್ಟವಾಗಿತ್ತು. ಆದರೂ ಈತ ತನ್ನ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿದ. 1815 ರಿಂದ ಎರಡು ವರ್ಷಕಾಲ ಇಂಗ್ಲೆಂಡಿನಲ್ಲಿ ತನ್ನ ದೇಶದ ಅಧಿಕೃತ ನಿಯೋಗಿಯಾಗಿ ಕಾರ್ಯನಿರ್ವಹಿಸಿದ. 1817ರಲ್ಲಿ ಸಂಯುಕ್ತ ಸಂಸ್ಥಾನದ ಸ್ವದೇಶಾಂಗ ಕಾರ್ಯದರ್ಶಿಯಾದ (ಸೆಕ್ರೆಟರಿ ಆಫ್ ಸ್ಟೇಟ್). ಏಳು ವರ್ಷಕಾಲ ಸಾಮಥ್ರ್ಯದಿಂದ ದೇಶದ ಒಳಾಡಳಿತ ಕಾರ್ಯವನ್ನು ನಿರ್ವಹಿಸಿದ. ಸಂಯುಕ್ತಸಂಸ್ಥಾನ ಮತ್ತು ಅಮೆರಿಕದಲ್ಲಿ ಅದರ ಮಿತ್ರರಾಷ್ಟ್ರಗಳ ವ್ಯವಹಾರಗಳಲ್ಲಿ ಯೂರೋಪಿನ ಯಾವ ರಾಷ್ಟ್ರವೂ ಕೈಹಾಕಕೂಡದೆಂಬ ಮನ್ರೊ ನೀತಿಯನ್ನು ರೂಪಿಸಿದವ ಈತನೇ. ರಾಷ್ಟ್ರಾಧ್ಯಕ್ಷನಾಗಿ ವಿರೋಧಪಕ್ಷದವರ ಕಿರುಕುಳದಿಂದ ಯಾವ ಮಹತ್ಕಾರ್ಯವನ್ನು ಸಾಧಿಸುವುದೂ ಅವನಿಂದಾಗಲಿಲ್ಲ. ಅಧ್ಯಕ್ಷಪದವಿ ಕೊನೆಗೊಂಡ ಮೇಲೆ ಹದಿನೇಳು ವರ್ಷಕಾಲ (1831-48) ರಾಷ್ಟ್ರದ ಕೆಳಮನೆಯ ಚುನಾಯಿತ ಸದಸ್ಯನಾಗಿ ನಿಂತು ತನ್ನ ವಿಶಾಲ ಅನುಭವ, ಪಾಂಡಿತ್ಯಗಳ ಪ್ರಯೋಜನವನ್ನು ನಾಡಿಗೆ ನೀಡಿದ. ಗುಲಾಮಗಿರಿಯನ್ನು ಕಟುವಾಗಿ ಖಂಡಿಸಿ, ವ್ಯಕ್ತಿಸ್ವಾತಂತ್ರ್ಯಕ್ಕೆ ಬೆಂಬಲಕೊಟ್ಟ. ತನ್ನ ಪ್ರಾಮಾಣಿಕ ಶ್ರದ್ಧೆ ಮತ್ತು ವ್ಯವಹಾರಜ್ಞಾನದಿಂದ ಹಿರಿಯ ರಾಷ್ಟ್ರನಾಯಕನಾಗಿ ಜನತೆಯ ವಿಶ್ವಾಸ ಸಂಪಾದಿಸಿದ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ